ವಾಸುದೇವ್, ಎಸ್ ಜಿ
	(1941- ) ಮೈಸೂರಿನಲ್ಲಿ 3ನೇ ಮಾರ್ಚಿ 1941ರಲ್ಲಿ ಜನಿಸಿದ ಎಸ್.ಜಿ. ವಾಸುದೇವ್ ಅವರು ಮೊದಲಿಗೆ ಸ್ವಂತ ಪರಿಶ್ರಮದಿಂದ ಚಿತ್ರಕಲೆ ಕುರಿತು ಪತ್ರಿಕೆಗಳಲ್ಲಿ, ಶಾಲಾ ಕಾಲೇಜು ದಿನಗಳಲ್ಲಿ ಪ್ರಕಟಿಸುತ್ತಿದ್ದು ನಂತರ ಚೆನ್ನೈನ ಚಿತ್ರಕಾಲಾ ಶಾಲೆಯಲ್ಲಿ ಕೆ.ಸಿ.ಎಸ್. ಪಣಿಕರ್ ಅವರಲ್ಲಿ ಕ್ರಮಬದ್ಧವಾಗಿ ಅಭ್ಯಸಿಸಿ ರಾಷ್ಟ್ರದ ಕಲಾಕ್ಷೇತ್ರದಲ್ಲಿ ತಮ್ಮದೇ ಆದ ಒಂದು ಶೈಲಿ ಹಾಗೂ ಸ್ಥಾನ ಮಾನಗಳನ್ನು ಪಡೆದಿದ್ದಾರೆ. ಕೃತಿಗಳು ರೇಖಾಪ್ರಧಾನವಾಗಿದ್ದು ಭಾರತೀಯತೆ ಸಾಂಪ್ರದಾಯಿಕ ಶಾಲೆಯ ಮುಂದುವರಿದ ರೂಪ. ಆಕಾರಗಳನ್ನು ಜೋಡಿಸುತ್ತ ಹೋಗುವ ರೀತಿ, ಬಣ್ಣಗಾರಿಕೆ, ಚಿತ್ರಕಲೆಗೆ ಸಂಬಂಧಿಸಿದ ಎಲ್ಲ ಮಾಧ್ಯಮಗಳಲ್ಲೂ ಪ್ರಯೋಗ ನಡೆಸಿ ಯಶಸ್ವಿಯಾಗಿರುವಿಕೆ, ವ್ಯಾಪಕವಾಗಿ ದೇಶ-ವಿದೇಶಗಳಲ್ಲಿ ಸಂಚಾರ, ನಿರಂತರ ಕೃತಿರಚನೆ, ಕ್ರಿಯಾಶೀಲ ಮನಸ್ಸು ಏಕವ್ಯಕ್ತಿ ಹಾಗೂ ಗುಂಪು ಪ್ರದರ್ಶನಗಳಲ್ಲಿ ಎಡಬಿಡದೆ ಭಾಗವಹಿಸುವಿಕೆ, ಕಲಾ ಸಂಘಟಣೆಗಳಲ್ಲಿ ತೊಡಗಿಸಿಕೊಳ್ಳುವಿಕೆ ಇವೇ ಮುಂತಾದವುಗಳನ್ನು ವಿಮರ್ಶಕರು ಸಹೃದಯರು ಮನ  ದುಂಬಿ ಹೇಳಿದ್ದಾರೆ, ಬರೆದಿದ್ದಾರೆ.

	ವಾಸುದೇವ್ ಅವರ ಮೊದಲ ಏಕವ್ಯಕ್ತಿ ಕಲಾಪ್ರದರ್ಶನ 1966ರಲ್ಲಿ ಇ.ಜಿ.ಕೆ ಅವರ ಛಾಯಾಚಿತ್ರ ಸ್ಟುಡಿಯೋವಿನಲ್ಲಾಯಿತು. ನಂತರ ಬೆಂಗಳೂರಿನ ವಿಶ್ವೇಶ್ವರಯ್ಯ ವಾಣಿಜ್ಯ ಸಂಕೀರ್ಣ. ವೆಂಕಟಪ್ಪ ಚಿತ್ರಶಾಲೆ, ಮ್ಯಾಕ್ ಮುಲ್ಲರ್ ಭವನ, ಕ್ರಿಮ್‍ಸನ್, ಸುಮುಖಗಳಲ್ಲದೆ ಸಾಕ್ಷಿ ಗ್ಯಾಲರಿಯಲ್ಲಿ ಐದು ಪ್ರದರ್ಶನಗಳು ನಡೆದವು. ಚೆನ್ನೈನ ಬ್ರಿಟಿಷ್ ಕೌನ್ಸಿಲ್, ಸ್ಥಳೀಯ ಗ್ರಂಥಾಲಯ ಪ್ರಾಧಿಕಾರ, ಆಕ್ಸ್‍ವರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, ಸಾಕ್ಷಿ ಗ್ಯಾಲರಿ, ಆರ್ಟ್‍ವಲ್ರ್ಡ್, ಲಲಿತಕಲಾ ಅಕಾಡೆಮಿಯ ಪ್ರಾದೇಶಿಕ ಕೇಂದ್ರ. ಅಮಿತ್ಯಾ (ಂmeಣhಥಿsಣ) ಗ್ಯಾಲರಿಗಳಲ್ಲೂ ಹೈದರಾಬಾದ್‍ನ ಸೂರ್ಯ ಗ್ಯಾಲರಿಯಲ್ಲಿ ಎರಡು ಬಾರಿ ಪ್ರದರ್ಶನಗಳಾದವು. ಮುಂಬಯಿಯ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಐದು ಬಾರಿ, ಪೆಂಡೊಲೆ ಗ್ಯಾಲರಿಯಲ್ಲಿ ಮೂರು ಬಾರಿ, ಸಾಕ್ಷಿ ಗ್ಯಾಲರಿಯಲ್ಲಿ ನಾಲ್ಕು ಬಾರಿ ಹಾಗೂ ಕ್ಯಾಮಲಿನ್ ಗ್ಯಾಲರಿಯಲ್ಲಿ ಒಂದು ಬಾರಿ ಏಕವ್ಯಕ್ತಿ ಪ್ರದರ್ಶನಗಳಾದವು. ದೆಹಲಿಯ ಶ್ರೀಧರಣಿ ಕಲಾಗ್ಯಾಲರಿಯಲ್ಲಿ ಮೂರು ಬಾರಿ, ಅಖಿಲ ಭಾರತ ಕಲೆ ಮತ್ತು ಕರಕುಶಲ ಸೊಸೈಟಿ, ಗ್ಯಾಲರಿ ಚಾಣಕ್ಯ, ಇಂಡಿಯ ಇಂಟರ್ ನ್ಯಾಷನಲ್ ಸೆಂಟರ್, ವಡೇರ ಗ್ಯಾಲರಿಗಳಲ್ಲಿ ತಲಾ ಒಂದೊಂದು ಬಾರಿ ಏಕವ್ಯಕ್ತಿ ಕಲಾ ಪ್ರದರ್ಶನ ನಡೆಯಿತು. ಹೊರದೇಶದಲ್ಲಿ ಕೆನಡಾದ ಒಟ್ಟಾವದ ಸಿಟಿಹಾಲ್, ನ್ಯೂಯಾರ್ಕ್‍ನ ಎಡ್‍ಮಿಟ್ ಒನ್ ಗ್ಯಾಲರಿ ಜರ್ಮನಿಯ ಮ್ಯೂಸಿಕ್‍ನ ಯೂರೋಪಿಯನ್ ಪೇಟೆಂಟ್ ಹೌಸ್ ಹಾಗೂ ಗ್ಯಾಲರಿಯ ಮುಲ್ಲರ್ ಎಂಡ್ ಪ್ಲೊಟೆ, ಲಂಡನ್‍ನ ನೆಹರು ಕೇಂದ್ರಗಳಲ್ಲಿ ವಾಸು ಅವರ ಏಕವ್ಯಕ್ತಿ ಪ್ರದರ್ಶನಗಳು ಸಂಘಟಿತಗೊಂಡಿವೆ. (ಒಟ್ಟಾರೆಯಾಗಿ 49 ಪ್ರದರ್ಶನಗಳು).

	ಸುಮಾರು 80 ಗುಂಪು ಪ್ರದರ್ಶನಗಳಲ್ಲಿ ವಾಸುದೇವ್ ಅವರ ಕೃತಿಗಳು ಪ್ರದರ್ಶನಗೊಂಡಿವೆ ಅವುಗಳಲ್ಲಿ ಮುಖ್ಯವಾಗಿ ದೆಹಲಿಯ ಪ್ರತಿಷ್ಠಿತ ಟ್ರಿನಾಲೆ (ಎರಡರಿಂದ ಐದನೇ ಟ್ರಿನಾಲೆವರೆಗೆ ನಾಲ್ಕು ಬಾರಿ) ಕೇಂದ್ರ ಲಲಿತ ಕಲಾ ಅಕಾಡೆಮಿಯ ಐದು ಪ್ರದರ್ಶನಗಳಲ್ಲಿ ಭಾರತದಲ್ಲಿ ನಡೆದ ಜಾಗತಿಕ ಪ್ರದರ್ಶನಗಳಲ್ಲಿ ದೆಹಲಿ, ಕೋಲ್ಕತಾ, ಮುಂಬಯಿ, ಚನ್ನೈ, ಹೈದರಾಬಾದ್, ಕೊಚ್ಚಿ, ಗೋವಾ ಇತ್ಯಾದಿಗಳಲ್ಲಿಯ ಲಲಿತ ಕಲಾ ಅಕಾಡೆಮಿಗಳು ಸಂಘ ಸಂಸ್ಥೆಗಳು, ಗ್ಯಾಲರಿಗಳು ನಡೆಸಿದ ವಾರ್ಷಿಕ ಹಾಗೂ ಇನ್ನಿತರ ಪ್ರದರ್ಶನದಲ್ಲಿ ವಾಸುದೇವ್ ಅವರು ಭಾಗವಹಿಸಿದ್ದಾರೆ. ನಾರ್ವೆ, ಡೆನ್‍ಮಾರ್ಕ್, ಬೆಲ್ಜಿಯಂಗಳಲ್ಲಿಯ ಭಾರತೀಯ ಸಮಕಾಲೀನ ಕಲಾಪ್ರದರ್ಶನ, ಅಮೆರಿಕೆಯ ರಾಷ್ಟ್ರೀಯ ಸಮಕಾಲೀನ ಗ್ಯಾಲರಿ. ಜಪಾನ್‍ನಲ್ಲಿ ಭಾರತೀಯ ಹಬ್ಬ, ಪ್ಯಾರಿಸ್‍ನ ಬೈನಾಲೆ, ಕ್ಯೂಬಾದ ಬೈನಾಲೆ, ಯುಗೋಸ್ಲೋವಿಯದಲ್ಲಿ ನಾಲ್ಕು ಬಾರಿ ಅಂತರರಾಷ್ಟ್ರೀಯ ರೇಖಾ ಚಿತ್ರ ಪ್ರದರ್ಶನಗಳು, ಲಂಡನ್‍ನಲ್ಲಿ ದಕ್ಷಿಣ ಭಾರತ ಸಮಕಾಲೀನ ಚಿತ್ರ, ಶಿಲ್ಪ ಕಲಾ ಪ್ರದರ್ಶನ, ಹಾಂಗ್‍ಕಾಂಗ್‍ನಲ್ಲಿ `ಸ್ತ್ರೀ ಕುರಿತ ಭಾರತೀಯ ಸಮಕಾಲೀನ ಚಿತ್ರ ಪ್ರದರ್ಶನಗಳಲ್ಲಿ ಭಾಗವಹಿಸಿರುವುದನ್ನು ಉದಾಹರಿಸಬಹುದು.

	ಚಿತ್ರಕಲಾ ಪರಿಷತ್ತಿನಲ್ಲಿ 1972ರಲ್ಲಿ ಭಾಗವಹಿಸಿದ ಕಲಾ ಶಿಬಿರದಿಂದ ಆರಂಭಿಸಿ ರಾಜ್ಯದ ಚಿಕ್ಕಮಗಳೂರು, ಮಂಗಳೂರು, ಬೆಂಗಳೂರು ಸೇರಿದಂತೆ ದೆಹಲಿ, ಕೊಲ್ಕತ್ತಾ, ಚೆನ್ನೈ, ಹೈದರಾಬಾದ್, ಶ್ರೀನಗರ, ಜೈಪುರ, ಮುಂಬಯಿಗಳಲ್ಲಿಯ ಉದ್ಯಮ ಪತಿಗಳ ಹೋಟೆಲ್‍ಗಳ ಕಲಾ ಸಂಘಟಿಕರ, ಅಕಾಡೆಮಿಗಳ ಕಲಾ ಮೇಳಗಳ ಗ್ಯಾಲರಿಗಳ ಕಲಾ ಶಿಬಿರಗಳಲ್ಲಿ ಭಾಗವಹಿಸಿದ್ದು ಅವುಗಳ ಸಂಖ್ಯೆ ಇಪ್ಪತ್ತೈದರ ಸುಮಾರಿನಲ್ಲಿದೆ.

	ಕಲೆಯ ಎಲ್ಲ ಪ್ರಕಾರಗಳಲ್ಲಿ ಅಭಿವ್ಯಕ್ತಿಸಿರುವ ವಾಸುದೇವ್ ಅವರು ಹಲವಾರು ಭಿತ್ತಿ ಚಿತ್ರ ರಚನೆ ಸಹ ಮಾಡಿದ್ದಾರೆ. ಬೆಂಗಳೂರಿನ ಸಂತೋಷ್ ಚಿತ್ರಮಂದಿರ, ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆಯ ಕಾರ್ಯಾಲಯ, ಭಾರತೀಯ ಏರಿಯೋನಾಟಿಕಲ್ ಸೊಸೈಟಿ, ಏಂಜಲ್ ಪ್ಯಾಲೆಸ್ ಕಟ್ಟಡ ಸಮುಚ್ಛಯ, ಜಿನೇವಾ ಹೌಸ್‍ಗಳಲ್ಲಿ ಚೆನ್ನೈನ ಸತ್ಯ ಸಿನಿಮಾ ಮಂದಿರ, ಅಶೋಕ್ ಲೈಲಾಂಡ್, ಕೆನರಾ ಬ್ಯಾಂಕ್‍ಗಳಲ್ಲಿ ಹಾಗೂ ನ್ಯೂಯಾರ್ಕ್‍ನ ತಂದೂರ್ ರೆಸ್ಟೋರೆಂಟ್‍ನಲ್ಲಿ ಇವರು ರಚಿಸಿದ ಭಿತ್ತಿ ಚಿತ್ರಗಳನ್ನು ಕಾಣಬಹುದು.

	ವಾಸುದೇವ್ ಅವರು ಸ್ವತಃ ಹಲವಾರು ಬಾರಿ ವಿದೇಶಗಳಲ್ಲಿ ಸಂಚರಿಸಿರುವರಾದರೂ  ವಿಶೇಷ ಆಹ್ವಾನದ ಮೇಲೂ ಹೋಗಿರುವುದುಂಟು. ಮುಖ್ಯವಾಗಿ ಅಮೆರಿಕೆಗೆ 1977 ಹಾಗೂ 90ರಲ್ಲಿ ಇಂಗ್ಲೆಂಡ್‍ಗೆ 1977, 83.90.2002ರಲ್ಲಿ. ಫ್ರಾನ್ಸ್‍ಗೆ 1980ರಲ್ಲಿ, ಚೀನಾಗೆ 1985, ಕೆನಡಗೆ 1977, ಜರ್ಮನಿಗೆ 1980, 83, 90, 2002 ಹಾಗೂ ದುಬೈ 2001ರಲ್ಲಿ ಆಹ್ವಾನ ಹಾಗೂ ಸಾಂಸ್ಕøತಿಕ ವಿನಿಮಯ ಕಾರಣದಿಂದ ಪ್ರವಾಸ ಮಾಡಿ ಬಂದಿದ್ದಾರೆ.

	ಕನ್ನಡದ ಕೆಲವು ಪ್ರಾಯೋಗಿಕ ಚಿತ್ರಗಳ ಕಾರ್ಯದಲ್ಲಿ ವಿವಿಧ ರೀತಿ ತೊಡಗಿಸಿಕೊಂಡಿದ್ದರು. ಪಲ್ಲವಿ, ಕಾಡು, ಒಂದಾನೊಂದು ಕಾಲದಲ್ಲಿ ಚಿತ್ರಗಳಿಗೆ ಟೈಟಲ್ ಕಾರ್ಡ್‍ಗಳನ್ನು ಸಂಸ್ಕಾರ, ವಂಶವೃಕ್ಷಗಳಿಗೆ ಟೈಟಲ್ ಕಾರ್ಡ್ ಸೇರಿದಂತೆ ಕಲಾನಿರ್ದೇಶನವನ್ನು ಮಾಡಿದ್ದು ಅವುಗಳಿಗೆ ಆಯಾ ವರ್ಷದ ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಚಿತ್ರಗಳೆಂದು ಪ್ರಶಸ್ತಿಯನ್ನೂ ಪಡೆದಿವೆ.

	ವಾಸುದೇವ್ ಅವರ ಕೃತಿಗಳು ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿ, ರಾಷ್ಟ್ರೀಯ ಲಲಿತ ಕಲಾ ಅಕಾಡೆಮಿಯದೂ ಸೇರಿದಂತೆ ವಿವಿಧ ರಾಜ್ಯಗಳ ಅಕಾಡೆಮಿಗಳು, ಕಲಾ ಗ್ಯಾಲರಿಗಳು, ಸಂಘ ಸಂಸ್ಥೆಗಳು, ಮ್ಯೂಸಿಯಂಗಳು, ಕಂಪನಿಗಳು, ಇಲಾಖೆಗಳು ಇತ್ಯಾದಿಗಳಲ್ಲೂ ದೇಶ-ವಿದೇಶಗಳ ಕಲಾಪ್ರೇಮಿಗಳಲ್ಲೂ ಸಂಗ್ರಹಿತವಾಗಿದೆ.

	ಎ.ಕೆ.ರಾಮಾನುಜಂ, ರಾಮಚಂದ್ರಶರ್ಮ, ದ.ರಾ.ಬೇಂದ್ರೆ ಮುಂತಾದವರ ರಚನೆಗಳಿಂದ ಸ್ಫೂರ್ತಿಗೊಂಡು ಸರಣಿ ಚಿತ್ರ ರಚನೆ ಮಾಡಿರುವುದಲ್ಲದೆ ಅನೇಕರ ಪುಸ್ತಕಗಳಿಗೆ, ನೆನಪಿನ ಸಂಚಿಕೆಗಳಿಗೆ  ಭಿತ್ತಿ ಚಿತ್ರ, ಆಹ್ವಾನ ಪತ್ರಿಕೆಗಳಿಗೆ ಕಲಾ ವಿನ್ಯಾಸ ರಚಿಸಿದ್ದಾರೆ. ಚೆನ್ನೈನಲ್ಲಿ ಕಲಾವಿದರೇ ಸೇರಿ ಸಂಘಟನೆಯ ರೂಪದಲ್ಲಿ ಚೋಳ ಮಂಡಲ ಕಲಾಗ್ರಾಮವೊಂದನ್ನು ರೂಪಿಸಿ ಹಲವಾರು ಕಲಾವಿದರು ಒಟ್ಟಾಗಿ ಚಿತ್ರ, ಶಿಲ್ಪ ರೂಪಿಸುವ, ಮಾರಾಟ ಮಾಡುವ, ಆಗಾಗ್ಗೆ ವಿಚಾರ ಸಂಕಿರಣ, ಕಲಾ ಶಿಬಿರ ಏರ್ಪಡಿಸುವ ಕಾರ್ಯ ನಡೆಯುತ್ತಿದ್ದು, ವಾಸುದೇವ್ ಹಾಗೂ ಅವರ ಸಹಪಾಠಿ, ಕಲಾವಿದೆ. ಪತ್ನಿಯಾಗಿದ್ದ ಅರ್ನಾವಾಸ್ ಅವರು ಕಲಾ ಗ್ರಾಮದ ಆರಂಭಿಕ ಸದಸ್ಯರಾಗಿದ್ದರು. ಅರ್ನಾವಾಸ್ ಅವರು ತೀರಿಕೊಂಡ ಮೇಲೆ ಅವರ ನೆನಪಿನಲ್ಲಿ ಕೆಲವು ಕಲಾವಿದ. ವಿದ್ಯಾರ್ಥಿಗಳಿಗೆ ಧನ ಸಹಾಯವನ್ನು ವಾಸುದೇವ್ ಅವರು ನೀಡುತ್ತಿದ್ದಾರೆ.

	ಕೇಂದ್ರ ಲಲಿತ ಕಲಾ ಅಕಾಡೆಮಿಗೆ (1981-83) ಹಾಗೂ ರಾಜ್ಯ ಲಲಿತ ಕಲಾ ಅಕಾಡೆಮಿಗೆ (1979-83) ಸದಸ್ಯರಾಗಿದ್ದಲ್ಲದೆ ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಯ ಸಲಹಾ ಸಮಿತಿಯ ಸದಸ್ಯರು ಆಗಿದ್ದರು (2001) ಕಲಾಮೇಳಗಳಲ್ಲದೆ ಹಲವಾರು ಕಲಾಪರ ಸಂಘಟಣೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸಕ್ರಿಯವಾಗಿರುವ ವಾಸುದೇವ್ ಅವರು ಆಧುನಿಕ ಕಲಾಕ್ಷೇತ್ರದಲ್ಲಿ ಸಮಕಾಲೀನ ಹಾಗೂ ಯುವ ಕಲಾವಿದರಿಗೆ ಸ್ಫೂರ್ತಿಯ, ಆದರ್ಶದ ನೆಲೆಯಾಗಿದ್ದಾರೆ.

	ವಾಸುದೇವ್ ಅವರ ಕೃತಿಗಳಲ್ಲಿ ಪ್ರಧಾನವಾಗಿ ಕರಡು ಬರುವುದು `ವೃಕ್ಷ, ಹಾಗೂ ಸಾಂಕೇತಿಕ ರೂಪಗಳು. ಫಲಕದ ಮೇಲೆ ಪ್ರಧಾನವಾಗಿ `ವೃಕ್ಷ ರಚಿತವಾಗಿದ್ದು ಉಳಿದಂತೆ ವ್ಯಕ್ತಿಗಳು, ಪ್ರಾಣಿಗಳು, ಎಲೆ ಬಳ್ಳಿಗಳು, ಇಮಿತಿಯ ಆಕಾರಗಳು ಇತ್ಯಾದಿಯಲ್ಲದೆ ಕನ್ನಡ ಲಿಪಿಯನ್ನು ಅಲಂಕಾರಿಕವಾಗಿ ಕಲಾತ್ಮಕವಾಗಿ ಬಳಸಿಕೊಂಡಿದ್ದಾರೆ. ಚಿತ್ರದ ಶೀರ್ಷಿಕೆಗಳು `ವೃಕ್ಷ ವಷ್ಟೆ ಅಲ್ಲದೆ, `ಅವನು, `ಅವಳು, `ಮಿಥುನ, `ಅವನು-ಅವಳು-ಮರ ಮತ್ತು ಕೋತಿ ಇತ್ಯಾದಿಯಾಗಿದ್ದು ಒಳ ಮನಸ್ಸಿನ ತುಮುಲಗಳು. ಅನಿಸಿಕೆಗಳು ಕಾಣಬಹುದು. ಈಚೆಗೆ ನಾಟಕದ ರಂಗ ಮಂದಿರ ನೆನಪಿಸುವಂತೆ ಕೆಲವು ಕಲಾಕೃತಿಗಳು ರಚನೆಯಾಗಿದ್ದು ಚಿತ್ರಿತ ಹಾಗೂ ಚಿತ್ರಿತವಲ್ಲದ (ವಿಷಮ ತೆರಪು-ನೆಗೆಟಿವ್ ಸ್ಟೇಸ್) ಭಾಗಗಳು ಪರಸ್ಪರ ಪೂರಕವಾಗಿರುವುದನ್ನು ಕಾಣಬಹುದು.

	“ಈ ಎಲ್ಲ ಕೃತಿಗಳಲ್ಲಿ (ಖಿheಚಿಣಡಿe oಜಿ ಟiಜಿe) ಅವಕಾಶ (sಠಿಚಿಛಿe) ವನ್ನು ನಿರ್ವಹಿಸಿಕೊಂಡಿರುವ ರೀತಿಯಲ್ಲಿ ಕುತೂಹಲಕಾರಿ ವೈವಿಧ್ಯವಿದೆ. ಮುಖಗಳು ಜಾನಪದೀಯ ಸತ್ವಗಳ ರೇಖೆ ಕ್ಯಾಲಿಗ್ರಫಿ ರೂಪಗಳನ್ನು ಅಲ್ಲದೆ ಸಮಕಾಲೀನವಾಗಿ ಸೌಝನ್ ವಿಕೃತಿಯನ್ನು ತಮ್ಮದೇ ಆದ ರೀತಿಯಲ್ಲಿ ಕಪ್ಪು ಬಣ್ಣದ ವೈಭವೀಕರಣದಲ್ಲಿ ವಾಸುದೇವ್ ಅವರಿಂದ ರೂಪಿಸಿಕೊಂಡಿವೆ. ಇನ್ನೂ ಕೆಲವು ಮುಖಗಳು (ನಟರು ಎನ್ನಿ) ವಾಸುದೇವ್ ಅವರ ರೇಖೆ, ಕ್ಯಾಲಿಗ್ರಫಿ ಮೈವಳಿಕೆ ಹಾಗೂ ವಿಕೃತಿ ಸೌಂದರ್ಯಗಳಿಂದ ಅನನ್ಯವಾಗಿ ಮೂಡಿ ಬಂದಿದೆ. ತಮ್ಮ ರೇಖೇ, ಬಣ್ಣ ರೂಪಗಳಲ್ಲಿ ಪೌರ್ವಾತ್ಯ ಚಿಂತನೆಯ ಫಲದಂತೆ ಇಂದಿನ ಗ್ರಾಮೀಣ ಭಾರತೀಯ ಬದುಕಿನ ಒಳನೋಟಗಳನ್ನು ತೋರುತ್ತಿರುವ ವಾಸುದೇವ್ ನಮ್ಮ ಸಾಂಸ್ಕøತಿಕ ರಂಗದ ಪ್ರಮುಖರಲ್ಲಿ ಒಬ್ಬರಾಗಿ ಅಭಿವ್ಯಕ್ತಿಯಿಂದ ಪ್ರಭಾವಶಾಲಿ ಕಲಾವಿದರಾಗಿದ್ದಾರೆ”. ಎಂದು ವಿಮರ್ಶಕರ ಅಭಿಪ್ರಾಯ.						
(ಎ.ಎಲ್.ನರಸಿಂಹನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ